ದ್ವಿಕವಚಿಗಳು-
	ಎರಡು ಹೋಳಾದ ಚಿಪ್ಪುಗಳುಳ್ಳ ಸಿಂಪಿ, ಶಿಫಲ, ಮಳಿಚಿಪ್ಪು ಮುಂತಾದ ಮೃದ್ವಂಗಿಗಳ ಸಾಮಾನ್ಯ ಹೆಸರು (ಬೈವಾಲ್ವಿಯ).  ದ್ವಿಚಿಪ್ಪಿ, ಇಚ್ಚಿಪ್ಪಿ, ಪರ್ಯಾಯನಾಮಗಳು.  ಇವುಗಳಲ್ಲಿ ಎಲೆರೂಪದ ಪುಪ್ಫುಸಗಳಿರುವುದರಿಂದ ಪತ್ರಶ್ವಾಶಿಗಳೆಂದೂ ನೇಗಿಲಿನಾಕಾರದ ಪಾದವಿರುವುದರಿಂದ ಹಲಪಾದಿಗಳೆಂದೂ ಇವನ್ನು ಕರೆವುದುಂಟು.  ಈ ಗುಂಪಿನ ಬಹುತೇಕ ಪ್ರಾಣಿಗಳು ಕಡಲವಾಸಿಗಳಾದರೂ ಕೆರೆ, ಕುಂಟೆ ಮತ್ತು ತೊರೆಗಳಲ್ಲೂ ಕಾಣಬರುತ್ತದೆ.  ದೇಹವನ್ನು ಆವರಿಸಿರುವ ಎರಡು ಗಡಸು ಚಿಪ್ಪುಗಳು ಚಿಲಕದಂತಿರುವ ದಂತರೂಪಿ ಕೀಲಿನ ಸಹಾಯದಿಂದ ಚಲಿಸಬಲ್ಲವು.  ನಶಿಸಿದ ಶಿರ ಮತ್ತು ದ್ವಿಪಾಶ್ರ್ವ ಸಮಾಂಗತೆಯನ್ನು ತೋರುವ ದೇಹ ಹಾಗೂ ಕಿವಿರುಗಳು ದ್ವಿಕವಚಿಗಳ ವೈಶಿಷ್ಟ್ಯ.  ಕಿವಿರುಗಳು ಅನಿಲ ವಿನಿಮಯದ ಜೊತೆಗೆ ಆಹಾರ ಶೇಖರಣೆಯಲ್ಲೂ ಬೆಳವಣಿಗೆಯಲ್ಲೂ ನೆರವಾಗುತ್ತವೆ.  ದ್ವಿಕವಚಿಗಳಲ್ಲಿ ಮಾಂಸಭರಿತ ಪಾದ ಇದ್ದು ಅದು ಮಣ್ಣು ಮತ್ತು ಮರಳನ್ನು ಬಗಿದು ಹಾಕಲು ಸಹಕಾರಿಯಾಗಿವೆ.  ಈ ಗುಂಪಿನ ಅನೇಕ ಪ್ರಾಣಿಗಳು ಅಂಟುದಾರವೊಂದರ ನೆರವಿನಿಂದ ಆಧಾರಕ್ಕೆ ಅಂಟಿಕೊಳ್ಳುವುದುಂಟು.

	ಕೆಲವೇ ಪ್ರಭೇದಗಳ ವಿನಾ ಬಹುತೇಕ ದ್ವಿಕವಚಿಗಳೂ ಸ್ಥಾಯಿಜೀವಿಗಳು ಹಾಗೂ ಜಲತಳ ವಾಸಿಗಳು.  ಸಾಮಾನ್ಯವಾಗಿ ಮಣ್ಣಿನಲ್ಲೋ ಮರಳಿನಲ್ಲೊ ಹುದುಗಿರುತ್ತವೆ.  ಆದರೆ ಕೆಲವು ಬಗೆಗಳು ಶಿಲೆ, ಮರಮುಟ್ಟುಗಳನ್ನು ಕೊರೆದು ಆಶ್ರಯ ಪಡೆಯುವುದೂ ಉಂಟು.  ಮಳಿಚಿಪ್ಪುಗಳಂಥ ಕೆಲವು ದ್ವಿಕವಚಿಗಳಿಗೆ ಚಲನ ಸಾಮಥ್ರ್ಯ ಉಂಟು.  ಇವು ಶತ್ರುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚುರುಕಾಗಿ ಚಲಿಸಬಲ್ಲವು.  ಈ ಗುಂಪಿನಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳಿದ್ದು ಸುಮಾರು 7000 ಪ್ರಭೇದಗಳನ್ನು ಒಳಗೊಂಡಿದೆ.

	1 ಇತಿಹಾಸ ಮತ್ತು ವ್ಯಾಪ್ತಿ : ಇವು ರೂಪಿನಲ್ಲಿ ಕಠಿಣಚರ್ಮಿಗಳನ್ನು ಹೋಲುವುದರಿಂದಲೂ ಅತೃಪ್ತಿಕರ ರಕ್ಷಣಾ ವ್ಯವಸ್ಥೆಯನ್ನು ಪಡೆದಿರುವುದರಿಂದಲೂ ಇವುಗಳ ನಿರ್ದಿಷ್ಟ ಉಗಮಕಾಲ ಯಾವುದೆಂಬುದನ್ನು ಗೊತ್ತುಪಡಿಸಲಾಗಿಲ್ಲ.  ಆದರೂ ಕೇಂಬ್ರಿಯನ್ ಕಾಲದಲ್ಲಿದ್ದ ಗ್ಲಿಷ್ಟಾರ್ಕದ ಪಳೆಯುಳಿಕೆ ನಿಜಕ್ಕೂ ದ್ವಿಕವಚಿಯದೆಂದು ಬಗೆಯಲಾಗಿದೆ.  ಆರ್ಡೋವೀಸಿಯನ್ ಕಾಲದಲ್ಲಿ ಟಿನೋಡಾಂಟ ಮತ್ತು ಮೋಡಿಯೋಲೋಪ್ಸಿನ್‍ಗಳಂಥ ದ್ವಿಕವಚಿಗಳು ದೊರೆತಿದ್ದರೂ ಈ ಕಾಲಾವಧಿಯಲ್ಲಿ ಇವು ಬಹು ವಿರಳ ಸಂಖ್ಯೆಯಲ್ಲಿದ್ದವೆನ್ನಲಾಗಿದೆ.  ಸೈಲ್ಯೂರಿಯನ್ ಕಾಲ ಇವುಗಳ ಸುವರ್ಣ ಕಾಲ.  ಡಿವೋನಿಯನ್ ಕಾಲದ ಸರೋವರ ಪದರಗಳಲ್ಲಿ ಆಕ್ರ್ಯಾನೊಡಾನ್‍ಗಳೂ ಕಾರ್ಬಾನಿಫೆರಸ್‍ನಲ್ಲಿ ಈಗಿರುವ ಅನೇಕ ಪ್ರಭೇದಗಳೂ ಉಗಮವಾದುವೆಂದು ಹೇಳಲಾಗಿದೆ.  ಪುರಾತನ ಯುಗದ ಅನೇಕ ಕುಲಗಳ ಕಣ್ಮರೆಯಾಗಿ ಆಧುನಿಕ ದ್ವಿಕವಚಿಗಳು ಮೀಸೋಜೋಯಿಕ್‍ನಲ್ಲಿ ಕಾಣತೊಡಗಿದವು.  ಈಗಿನ ನ್ಯೂಜೆರ್ಸಿಗೂ ಮೆಕ್ಸಿಕೋಗೂ ಮಧ್ಯೆ 2500 ಮೈಲಿ ವಿಸ್ತೀರ್ಣದಲ್ಲಿ ಕ್ರಿಟೇಷಸ್ ಕಾಲದಲ್ಲಿ ಉದ್ಭವಿಸಿತೆಂದು ಹೇಳಲಾಗಿರುವ ಎಕ್ಸೊಗೈರ ಚಿಪ್ಪಿನ ಪಳೆಯುಳಿಕೆಯ ದಿಬ್ಬವು ದ್ವಿಕವಚಿಗಳ ಗತವೈಭವವನ್ನು ತೋರಿಸುತ್ತದೆ.  ದೋಷಪೂರಿತ ದೇಹರಕ್ಷಣಾ ವ್ಯವಸ್ಥೆಯಿಂದಾಗಿ ಈ ಪತ್ರಶ್ವಾಶಿಗಳ ಉಗಮ ಮತ್ತು ಆದಿಜೀವಿಗಳಿಗೂ ಇವಕ್ಕೂ ಇರುವ ಸಂಬಂಧವನ್ನು ತಿಳಿಯುವುದು ಬಹು ಕಷ್ಟ.

	ಎಲ್ಲ ದ್ವಿಕವಚಿಗಳೂ ಜಲಚರಿಗಳು.  ನಖ ಚಿಪ್ಪಿಗಳು ನೈಜ ವಾಸಸ್ಥಳವನ್ನು ಬಿಟ್ಟು ಆಗಾಗ್ಗೆ ನೀರಿನಿಂದ ಹೊರ ಬರುವುದುಂಟು.  ಈ ಬಗೆಯ ತಾತ್ಕಾಲಿಕ ಬದಲಾವಣೆಯಿಂದಾಗಿ ಬತ್ತಿದ ಕೆರೆ ಕುಂಟೆಗಳಲ್ಲಿ ಇವು ಜೀವಿಸಬಲ್ಲವಾಗಿವೆ.  ಪ್ರೋಟೋಬ್ರ್ಯಾಂಕಿಯ ಮತ್ತು ಸೆಪ್ಟಿಬ್ರ್ಯಾಂಕಿಯ ಕುಟುಂಬದವು ಸಂಪೂರ್ಣ ಕಡಲು ವಾಸಿಗಳಾದರೆ, ಯೂನಿಯೋನೇಶಿಯ ಮತ್ತು ಸ್ಫಿಯರಿಯೇಶಿಯ ಗುಂಪಿನ ಪ್ರಾಣಿಗಳು ಸಿಹಿನೀರಿನಲ್ಲಿ ಜೀವಿಸುತ್ತವೆ.  ಆದರೆ ನಿರಿಗೆಗಳು ಮಧ್ಯಮ ತರದ ಲವಣಾಂಶವುಳ್ಳ ನದಿಮುಖಜಭೂಮಿಗಳಿರುತ್ತವೆ.  ಸಿಹಿ ನೀರಿನ ಶಿಫಲಗಳು ಇರುಳಲ್ಲಿ ಮೇಲ್ನೀರಿನಲ್ಲಿದ್ದು ಹಗಲಲ್ಲಿ ತಳಕ್ಕೆ ಧಾವಿಸಿ ವಿರಮಿಸುತ್ತವೆ.  ಆಗ ಚಿಪ್ಪುಗಳ ಪಶ್ಚ ತುದಿ ಮಾತ್ರ ಕಾಣುವಂತೆ ಮಣ್ಣು ಅಥವಾ ಮರಳಿನಲ್ಲಿ ಇವು ಹುದುಗಿರುತ್ತವೆ.

	ದ್ವಿಕವಚಿಗಳು ಅಲೆಯ ವಲಯದ ಆಳವಿಲ್ಲದ ನೀರಿನಲ್ಲಿ ಹೇರಳವಾಗಿವೆಯಾದರೂ ಕೆಲವು 17,000 ಗಳ ಆಳದಲ್ಲೂ ವಾಸಿಸುವುದುಂಟು.  ಕೆಲವು ತಳದಲ್ಲಿ ತೆವಳಿದರೆ ಮತ್ತೆ ಕೆಲವು ಭೂಮಿಯಲ್ಲಿ ಹುದುಗಿರುತ್ತವೆ.  ಹೇರಳ ಆಹಾರ ದೊರಕುವ ಸ್ಥಳಗಳಲ್ಲಿ ವಿಪುಲವಾಗಿರುತ್ತವೆ.  ಪ್ರವಾಹದಲ್ಲಿ ಕೊಚ್ಚಿಹೋಗದಂತೆ ಕಡಲ ಶಿಫಲ (ಮೈಟಿಲಸ್) ಅಂಟುದಾರದಿಂದ ಆಧಾರಕ್ಕೆ ಅಂಟಿಕೊಳ್ಳುತ್ತದೆ.  ಸಿಂಪಿ ಶಿಲೆ ಮತ್ತಿತರ ಕಠಿಣ ಚಿಪ್ಪುಗಳಿಗೆ ಶಾಶ್ವತವಾಗಿ ಅಂಟಿರುವುದು ಫೋಲಾಸ್, ಲಿತೋಡೋಮಸ್, ಸ್ಯಾಕ್ಸಿಕಾವ ಮತ್ತು ಕ್ಲಾವಜೆಲಾಗಳು ಗಡಸು ಮಣ್ಣನ್ನಾಗಲೀ ಕಲ್ಲನ್ನಾಗಲೀ ಕೊರೆದು ಮಾಡಿಕೊಂಡ ಪೊಟರೆಗಳಲ್ಲಿ ಜೀವಿಸುತ್ತವೆ.  ಕತ್ತಿಚಿಪ್ಪು(ಸೊಲೆನ್) ಎಂಬುದು ಪದದ ಸಹಾಯದಿಂದ ಅಗೆದು, ನಿರ್ಮಿಸಿಕೊಂಡಿರುವ ಕೊಳವೆಯಾಕರದ 1 ಮೀ. ಆಳದ ಬಿಲದಲ್ಲಿ ವಾಸಿಸುತ್ತವೆ.  ಹಡಗು ಹುಳುಗಳು (ಟೆರೆಡೊ, ಬ್ರ್ಯಾಂಕಿಯ) ವಿಶಿಷ್ಟ ಬಗೆಯ ದ್ವಿಕವಚಿಗಳು.  ಅಗ್ರಭಾಗದಲ್ಲಿರುವ ಬೈರಿಗೆಯಂಥ (ಆಗರ್) ಚಿಕ್ಕ ಚಿಪ್ಪಿನಿಂದ ಮರವನ್ನು ಇವು ಕೊರೆಯುತ್ತವೆ.  ನೀರಿನಲ್ಲಿ ಮುಳುಗಿರುವ ಮರದ ದಿಮ್ಮಿಗಳು ಈ ಹುಳುಗಳ ಕೊರೆತದಿಂದಾಗಿ ಜೇನುಗೂಡಿನಂತೆ ಟೊಳ್ಳಾಗುವುದುಂಟು.  ಈ ಆಗರ್ ಒಂದೇ ಅಲ್ಲದೆ ವಿಶಿಷ್ಟ ಗ್ರಂಥಿಗಳಿಂದ ಸ್ರವಿಸುವ ಆಮ್ಲೀಯ ದ್ರವ ಕೂಡ ಮರಗಳನ್ನು ಕೊರೆಯುವ ಸಾಧನವಾಗಿದೆ.  ಪೆಕ್ಟೆನ್ ಪ್ರಾಣಿಯು ಅಂಟುದಾರದಿಂದ ಆಧಾರಕ್ಕೆ ಅಂಟಿಕೊಂಡರೂ, ಚಿಪ್ಪುಗಳ ಬಡಿತದಿಂದಾಗಿ ಈಜಬಲ್ಲದು.  ಎಂಟೋವಾಲ್ವ ಎಂಬುದು ಸಮುದ್ರ ಸವೆತಗಳಲ್ಲಿ ಪರತಂತ್ರ ಜೀವಿಯಾದರೆ, ಕೆಲವು ದ್ವಿಕವಚಿಗಳು ಕಠಿಣ ಮತ್ತು ಕಂಟಕಚರ್ಮಿಗಳೊಡನೆ ಪರಸ್ಪರಾವಲಂಬಿ ಜೀವನ ನಡೆಸುತ್ತವೆ.

	ಶೀತಪ್ರದೇಶಗಳಲ್ಲಿ ಕಾಣದೊರೆಯುವ ದ್ವಿಕವಚಿಗಳು ಪರಿಸರದ ನೀರು ಹೆಪ್ಪುಗಟ್ಟಿದರೂ ಜೀವಂತವಾಗಿರುವುವು.  ವುಡ್‍ಹೋಲ್ ತೀರದ ಅಲೆಯು ಅಂತರ್ವಲಯದಲ್ಲಿ ಜೀವಿಸುವ ಮೈಟಿಲಸ್ ಎಡುಲಿಸ್ ಮತ್ತು ಕ್ರ್ಯಾಸಾಸ್ಟ್ರಿಯಗಳನ್ನು ಅನೇಕ ವಾರಗಳವರೆಗೆ ದಿನಕ್ಕೆ 2 ರಿಂದ 6 ಘಂಟೆಗಳ ಕಾಲ  -100ಅ ನಿಂದ 200ಅ ಉಷúತೆಯಲ್ಲಿಟ್ಟರೂ ಬದುಕುತ್ತವೆ.  ದೇಹದ 60% - 65% ರಷ್ಟು ನೀರು ಹೆಪ್ಪುಗಟ್ಟಿದರೂ ಇವುಗಳ ಜೀವಕ್ಕೆ ಹಾನಿಯಿಲ್ಲವೆಂದೂ ತಿಳಿದುಬಂದಿದೆ. ಆದರೆ ಆಳ ನೀರಿನಲ್ಲಿ ವಾಸಿಸುವ ಇದೇ ಪ್ರಭೇದದ ಇತರ ಬಗೆಗಳು ಇಂಥ ವೈಪರೀತ್ಯವನ್ನು ತಡೆಯಲಾರವು.

	ಕೆಲವು ಬಗೆಯ ದ್ವಿಕವಚಿಗಳು ಹೇರಳ ಸಂಖ್ಯೆಯಲ್ಲಿ ಕಾಣದೊರೆಯುವುದುಂಟು.  ಉದಾಹರಣೆಗೆ ಇಂಗ್ಲೆಂಡಿನ ಪೂರ್ವಕ್ಕಿರುವ ಡಾಗರ್ ಬ್ಯಾಂಕ್‍ನ  700ಚ. ಮೈ. ವಿಸ್ತೀರ್ಣದಲ್ಲಿ ಸುಮಾರು 4,500,000,000 ದ್ವಿಕವಚಿಗಳಿರವುವೆಂದು ಅನೇಕ ಕಡಲು ತೀರಗಳಲ್ಲಿ ಕಂಡುಬರುತ್ತವೆ.

	2  ದೇಹ ರಚನೆ:  ದ್ವಿಕವಚಿಗಳ ದೇಹದಲ್ಲಿ ಆಚ್ಛಾದನ (ಮ್ಯಾಂಟಲ್).  ಪಾದ ಮತ್ತು ಚಿಪ್ಪು ಎಂಬ ಮೂರು ಭಾಗಗಳುಂಟು.  ಆದರೆ ನಿರ್ದಿಷ್ಟ ಶಿರವಿಲ್ಲ.

	(ಎ)  ಆಚ್ಛಾದನ : ಆಚ್ಛಾದನ ದೇಹದ ಅಕ್ಕಪಕ್ಕದಲ್ಲಿ ಮಡಿಕೆಗಳಂತೆ ಜೋತು ಬಿದ್ದಿದೆ.  ನ್ಯೂಕ್ಯುಲ, ಆರ್ಕ ಮುಂತಾದವುಗಳ ಆಚ್ಛಾದನದ ತಳ ಅಂಚಿಗೆ ಅಂಟಿರುವುದಿಲ್ಲ.  ಆದರೆ ಇತರ ಪ್ರಾಣಿಗಳಲ್ಲಿ ಅಲ್ಲಲ್ಲೇ ಕೂಡಿಕೊಂಡಿರುತ್ತದೆ. ಆಚ್ಛಾದನಾಶಯವು ಮೂರು ರಂಧ್ರಗಳಿಂದ - ಪಾಶ್ರ್ವಭಾಗದ ಸೇದುಗೊಳವೆ, ಮಧ್ಯದ ಒಸರುಗೊಳವೆ ಮತ್ತು ಅಗ್ರಭಾಗದ ಪಾದ - ಬಾಹ್ಯ ಪ್ರಪಂಚದೊಡನೆ ಸಂಪರ್ಕಿಸಿದೆ.  ಫೋಲಾಸ್ ಮುಂತಾದ ದ್ವಿಕವಚಿಗಳಲ್ಲಿ ನೀರ್ಗೋಳವೆಗಳು ಅತಿ ನೀಳವಾಗಿವೆ.  ಕೊಳವೆಯಾಕಾರದ ಬಿಲಗಳ ತಳದಲ್ಲಿ ಇವು ವಾಸಿಸಿದರೂ ಇಂಥ ನೀರ್ಗೋಳವೆಗಳಿಂದಾಗಿ ಜಲಾಭಿಸರಣೆಗೆ ಅಡಚಣೆಯಾಗುವುದಿಲ್ಲ.

	(ಬಿ) ಪಾದ : ಸಾಮಾನ್ಯವಾಗಿ ಪಾದ ಸ್ನಾಯುಪುಷ್ಟವಾದುದು.  ಯೋಲ್ಡಿಯ ಮತ್ತು ಸೊಲೇಮಿಯಗಳು ಚಪ್ಪಟೆಯಾದ ಅಂಗಾಲನ್ನು ಪಡೆದಿದ್ದು ಇದರ ನೆರವಿನಿಂದ ತೆವಳುತ್ತವೆ.  ಅನೇಕ ಪ್ರಭೇದಗಳು ತಮ್ಮ ಬಾಚಿಯಾಕಾರದ ಪಾದವನ್ನು ಅಗೆಯುವ ಸಾಧನವಾಗಿ ಉಪಯೋಗಿಸುತ್ತವೆ.  ಕೆಲವಲ್ಲಿ ಕ್ಷೀಣವಾದ ಪಾದದಿಂದ ರೂಪುಗೊಂಡಿರುವ ಅಂಟುದಾರಗಳು ದೇಹವನ್ನು ಆಧಾರಕ್ಕೆ ಬಂಧಿಸಲು ಸಹಕಾರಿಯಾಗಿವೆ.

(ಸಿ) ಚಿಪ್ಪು: ಡಿಂಬಾವಸ್ಥೆಯಲ್ಲಿ ಒಂದೇ ಒಂದು ಚಿಪ್ಪು ಕಂಡರೂ ರೂಪಾಂತರಣದಲ್ಲಿ ಇಚ್ಚಿಪ್ಪಾಗಿ ಪರಿವರ್ತನೆಯಾಗುತ್ತದೆ.  ಕೆಲವೇ ಪ್ರಾಣಿಗಳನ್ನುಳಿದು ಮತ್ತೆಲ್ಲವುಗಳಲ್ಲಿ ಈ ಎರಡು ಚಿಪ್ಪುಗಳೂ ದಂತರೂಪಿ ಕೀಲಿನ ಸಹಾಯದಿಂದ ಒಂದರ ಮೇಲೊಂದು ಸೇರಿವೆ.  ಈ ದಂತಗಳ ಜೋಡಣೆ, ಆಕಾರ ಮತ್ತು ಬೆಳೆವಣಿಗೆಗಳು ದ್ವಿಕವಚಿಗಳ ವರ್ಗೀಕರಣಕ್ಕೆ ಬಹು ನೆರವಾಗಿದೆ.  ಡಿಂಬದ ಚಿಪ್ಪಿನ ಅವಶೇಷಗಳಿಂದ ಬಂಧಕದಿಂದಲೂ ಎರಡು ಚಿಪ್ಪುಗಳು ಅಂಟಿರುತ್ತವೆ.  ಆಚ್ಛಾದನದಿಂದ ಉದ್ಭವಿಸಿದ ಒಂದು ಅಥವಾ ಎರಡು ಅಭಿಕರ್ಷಕ ಸ್ನಾಯುಗಳು ಚಿಪ್ಪುಗಳನ್ನು ಮುಚ್ಚಬಲ್ಲವು.  ಚಿಪ್ಪುಗಳಲ್ಲಿ ರೂಪ ವ್ಯತ್ಯಾಸವುಂಟು.  ಪೆಕ್ಟೆನ್ ಮತ್ತು ಆಸ್ಟಿಯಗಳಲ್ಲಿ ಭಿನ್ನ ಚಿಪ್ಪುಗಳಿದ್ದರೆ, ಪಿನ್ನ ಮತ್ತು ಅನೊಡಾಂಟಗಳ ಚಿಪ್ಪು ಕೀಲಿಯುದ್ದಕ್ಕೂ ಕೂಡಿರುತ್ತದೆ.  ಎನ್ಸಿಸ್ ಮತ್ತು ಸಿಲಿಕ್ವಗಳ ಚಿಪ್ಪು ನೀಳವಾದ ಕೊಳವೆಯಂತಿದ್ದರೆ, ಹಡಗು ಹುಳುಗಳಲ್ಲಿ ಬಹು ಚಿಕ್ಕದಾಗಿದೆ.  ಆದರೆ ನಿಯೋಬೆರೇಶಿಯದಲ್ಲಿ ಚಿಪ್ಪಿನ ಹೊರಮೈಯನ್ನು ಆಚ್ಛಾದನ ಆವರಿಸಿದೆ.

ಚಿಪ್ಪಿನ ಅಡ್ಡ ಸೀಳಿಕೆಯಲ್ಲಿ ಮೂರು ಪದರಗಳನ್ನು ಗುರುತಿಸಬಹುದು.  ಪೆರಿಯಾಸ್ಟ್ರೆಕಮ್ ಎಂಬ ಹೊರ ಪದರ ತೆಳುವಾದ ಕಂದುಮಿಶ್ರಿತ ಹಸಿರು ಬಣ್ಣದ ಪಾರದರ್ಶಕ ಕಾಂಕೋಲಿನ್ ಎಂಬ ಕೊಂಬು ಪದಾರ್ಥದಿಂದಾಗಿದೆ.  ಒರಟಾದ ಈ ಪದರ ಆಮ್ಲಗಳ ಸವೆತಕ್ಕೆ ಬಲಿಯಾಗದಂತೆ ಉಳಿದೆರಡು ಪದರಗಳನ್ನು ರಕ್ಷಿಸುತ್ತದೆ.  ಚಿಪ್ಪುಗಳ ನಾನಾ ವರ್ಣಕ್ಕೆ ಈ ಪದರವೇ ಕಾರಣ ನಡುಪದರವಾದ ಪ್ರಿಸ್ಮ್ಯಾಟಿಕ್ ಪದರವನ್ನೂ ಆಚ್ಚಾದನದ ಅಂಚೇ ಸ್ರವಿಸುತ್ತದೆ. ಇದರಲ್ಲಿ ತ್ರಿಕೋಣಾಕೃತಿಯ ಸುಣ್ಣದ ಹರಳುಗಳು ಚಿಪ್ಪಿನ ಮೇಲ್ಮೈಗೆ ಸಮಕೋನದಲ್ಲಿ ಜೋಡಣೆಗೊಂಡಿವೆ.  ಈ ಪದರ ಚಿಪ್ಪಿಗೆ ಬಲವೀಯುತ್ತದೆ.  ಒಳಪದರವಾದ ಮುತ್ತು ಮಾತೃ ಪದರವನ್ನು ಆಚ್ಫಾದನದ ಹೊರ ಮೇಲ್ಮೈ ಸ್ರವಿಸುವುದು.  ಹೊಳೆಯುವ ನಯವಾದ ಈ ಪದರದಲ್ಲಿ ಸುಣ್ಣ ಮತ್ತು ಕಾಂಕಿಯೊಲಿನ್‍ಗಳು ಪರ್ಯಾಯವಾಗಿ ಚಿಪ್ಪಿನ ಮೇಲ್ಮೈಗೆ ಸಮಾಂತರವಾಗಿ ವ್ಯವಸ್ಥಗೊಂಡಿವೆ.  ಆಚ್ಫಾದನವು ಚಿಪ್ಪಿನ ಮೇಲಾಗಲೀ ಅನ್ಯವಸ್ತುಗಳ ಸಂಪರ್ಕ ಸ್ಥಾನದಲ್ಲಾಗಲೀ ಈ ಬಗೆಯ ನೇಕ್ರಿಯಸ್ ಪದರವನ್ನು ಸ್ರವಿಸುವುದರಿಂದ ಮುತ್ತುಗಳು ರೂಪುಗೊಳ್ಳುವುವು.

(3)  ಜೀರ್ಣಾಂಗ ವ್ಯವಸ್ಥೆ : ಬಾಯಿ ತುಟಿಗಳಿಂದ ಆವೃತವಾಗಿದ್ದು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ.  ನ್ಯೂಕ್ಯುಲ ಮತ್ತು ಪೋರೊಮಿಯಗಳ ವಿನಃ ಉಳಿದ ಪ್ರಾಣಿಗಳ ಬಾಯಲ್ಲಿ ಜ್ಞಾನೇಂದ್ರಿಯಗಳಾಗಲಿ ಸ್ಪರ್ಶಾಂಗಗಳಾಗಲೀ ಇಲ್ಲ.  ನ್ಯೂಕ್ಯುಲಿಡೀ ಕುಟುಂಬದ ಸದಸ್ಯರಲ್ಲಿ ಮಾತ್ರ ಗಂಟಲು ಉಂಟು.  ಜಠರದ ಸುತ್ತ ಪಿತ್ತಜನಕಾಂಗವಿದೆ.  ಕೆಲವೊಮ್ಮೆ ಜಠರದ ಅಪಸರಣಾಂಗ ಪೈಲೋರಿಕ ಸೀಕಮ್ ಸೆಲ್ಯುಲೋಸ್ ಮತ್ತು ಪಿಷ್ಟಗಳನ್ನು ಜೀರ್ಣಿಸುವ ಕಿಣ್ವ ಜನಕ ಕೊರೆಕಂಬಿಯನ್ನು (ಕ್ರಿಸ್ಟಲೈನ್ ಸ್ಟೈಲ್) ಉತ್ಪತ್ತಿ ಮಾಡುತ್ತದೆ.  ಜಠರದ ಪಾಶ್ರ್ವ ಭಾಗದಲ್ಲಿರುವ ಕರುಳಿನಲ್ಲಿ ಟಿಪ್ಲೋಸೋಲ್ ರೂಪು ಗೊಂಡಿದೆ.  ಕರುಳು ಹೃದಯದ ಮೂಲಕ ಹಾದು ಗುದದ್ವಾರದಿಂದ ಆಚ್ಚಾದ ನಾಶಯಕ್ಕೆ ತೆರೆಯುತ್ತದೆ.  ಕಿವಿಗಳಲ್ಲಿರುವ ಶಿಲಿಕೆಗಳು ಆಹಾರ ಶೋಷಣೆ ಹಾಗೂ ಸಾಗಾಣಿಕೆಯಲ್ಲಿ ಸಹಕರಿಸುವುವು.

ಆಹಾರ ಹೊತ್ತ ನೀರಿನ ಪ್ರವಾಹ ನಿರಂತರವಾಗಿ ದೇಹವನ್ನು ಹೊಕ್ಕು ಹೊರ ಬರುತ್ತಿರುತ್ತದೆ.  ನೀರಿನಲ್ಲಿರುವ ಪೋಷಕ ವಸ್ತುಗಳು ಲೋಳೆರಸದಿಂದ (ಮ್ಯೂಕಸ್) ಕಿವಿರುಗಳಿಗೆ ಅಂಟಿಕೊಳ್ಳುತ್ತದೆ.  ಅನಂತರ ಆಹಾರ ವಸ್ತುಗಳು ಕಿವಿರಿನ ಅಧೋಭಾಗದಲ್ಲಿರುವ ಆಹಾರ ಮಾರ್ಗದ ಮೂಲಕ ಬಾಯೆಡೆಗೆ ಸಾಗುವುವು.  ಜಠರದಲ್ಲಿ ಜೀರ್ಣವಾಗದೆ ಉಳಿದ ವಸ್ತುಗಳು ಗುದದ್ವಾರದ ಮೂಲಕ ಆಚ್ಫಾದನಾಶಯಕ್ಕೆ ಬಂದು ಬೀಳುವುವು. ನೀರು ಒಸರುಗೊಳವೆಯ ಮೂಲಕ ಹೊರಬರುವಾಗ ಈ ತ್ಯಾಜ್ಯ ವಸ್ತುಗಳನ್ನು ಹೊರತರುತ್ತದೆ.

(4) ರಕ್ತ ಪರಿಚಲನೆ ಮತ್ತು ಉಸಿರಾಟ: ದ್ವಿಕವಚಿಗಳ ರಕ್ತ ವರ್ಣ ರಹಿತ. ಆದರೆ ಕತ್ತಿ ಚಿಪ್ಪು ಮತ್ತು ಆರ್ಸಿಡೀ ಕುಟುಂಬ ಸದಸ್ಯಗಳಲ್ಲಿ ಹೀಮೋಗ್ಲೋಬಿನ್ ಹಾಗೂ ರತಿ ಚಿಪ್ಪು ಮತ್ತು ನಿರಿಗೆಯಲ್ಲಿ ಹೀಮೊಸಯನಿನ್ ವರ್ಣಕಗಳೂ ಇವೆ.  ಒಂದು ಹೃತ್ಕುಕ್ಷಿ ಮತ್ತು ಎರಡು ಹೃತ್ಕರ್ಣಗಳಿಂದ ಕೂಡಿದ ಹೃದಯದಿಂದ ಹೊರಟ ಎರಡು ಮಹಾಪಧಮನಿಗಳು ದೇಹದ ಎಲ್ಲ ಅಂಗಗಳಿಗೂ ರಕ್ತ ಒದಗಿಸುತ್ತವೆ.  ಅಂತ್ಯದಲ್ಲಿ ರಕ್ತ ಕಜಳಿಗಳಲ್ಲಿ ಸಂಗ್ರಹಗೊಂಡು ಅನಿಲ ವಿನಿಮಯಕ್ಕಾಗಿ ಕಿವಿರುಗಳಿಗೆ ಒಯ್ಯಲ್ಪಡುತ್ತದೆ.  ಅನಂತರ ಶುದ್ಧ ರಕ್ತ ಹೃದಯವನ್ನು ಸೇರುತ್ತದೆ.  ಚಲನೆ ಮತ್ತು ರೂಪ ಬದಲಾವಣೆಯಲ್ಲಿ ಇದು ನೇರ ಪಾತ್ರ ವಹಿಸುವುದರಿಂದ ದ್ವಿಕವಚಿಗಳ ರಕ್ತವನ್ನು ದ್ರವಾಸ್ಥಿ ಎಂದು ಕರೆಯಲಾಗುತ್ತದೆ.

ದೇಹದ ಇಕ್ಕೆಡೆಗಳಲ್ಲಿ ಒಂದು ಜೊತೆ ಕಿವಿರುಗಳು ಉಂಟು.  ಈ ಕಿವಿರುಗಳು ಹಾಗೂ ಆಚ್ಫಾದನಗಳೇ ಈ ಪ್ರಾಣಿಗಳ ಶ್ವಾಶಾಂಗಗಳು, ಸೇದುಗೊಳವೆಯ ಮೂಲಕ ಆಚ್ಫಾದನಾಶಯಕ್ಕೆ ನುಗ್ಗಿದ ನೀರು, ಜಲನಳಿಕೆಗಳಲ್ಲಿ ಊಧ್ರ್ವಾಭಿಮುಖವಾಗಿ ಹರಿಯುವಾಗ, ಆಚ್ಫಾದನ ಮತ್ತು ಕಿವಿರುಗಳನ್ನು ತೋಯಿಸುವುದರಿಂದ ಅನಿಲಗಳ ವಿನಿಮಯ ನಡೆಯುತ್ತದೆ.
(5)  ನರಮಂಡಲ : ನರಮಂಡಲದಲ್ಲಿ ಜೋಡಿ ನರಮುಡಿ, ಬಂಧಿನಿ, ನರ ಹಾಗೂ ಇಂದ್ರಿಯಾಂಗಗಳಿವೆ. ಶಿರ ನರಮುಡಿ ಮತ್ತು ಪರೆ ನರಮುಡಿಗಳು ಒಂದಕ್ಕೊಂದು ಅಂಟಿರುವುದುಂಟು. ಪಾದದ ನರಮುಡಿಗಳು ಸಮೀಪವಾಗಿ ಯಾದರೂ ಉದರ ನರಮುಡಿಗಳು ಪಶ್ಚ ಅಭಿಕರ್ಷಕ ಸ್ನಾಯುವಿನ ಮೇಲೆ ಇದೆ. 

ಕಣ್ಣು, ಸಂತುಲನಾಂಗ, ಆಸ್ಟ್ರೇಡಿಯಂ ಮತ್ತು ಸಂವೇದಕ ಕೋಶಗಳು ಈ ಗುಂಪಿನ ಪ್ರಾಣಿಗಳ ಸಂವೇದನಾಂಗಗಳು ಆದರೆ ಇವಾವುವೂ ಚೆನ್ನಾಗಿ ರೂಪುಗೊಂಡಿಲ್ಲ. ಕಣ್ಣುಗಳು ಕೆಲವಲ್ಲಿ ಕೇವಲ ವರ್ಣಬಿಂದುಗಳಂತಿವೆಯಾದರೆ ಪೆಕ್ಟನ್ ಮತ್ತು ಸ್ಟಾಂಡೈಲಸ್‍ಗಳಲ್ಲಿ ನಿರ್ದಿಷ್ಟವಾಗಿವೆ. ನ್ಯೂಕ್ಯುಲ ಮತ್ತು ಪೋರೋಮಿಯಗಳ ಬಾಯಲ್ಲಿ ಸ್ಪರ್ಶಾಂಗಗಳುಂಟು. ಆದರೆ ಇತರ ಪ್ರಾಣಿಗಳ ಬಾಯಲ್ಲಿ ಈ ಬಗೆಯ ಜ್ಞಾನೇಂದ್ರಿಯಗಳಾವುವೂ ಇಲ್ಲ.

(6)  ವಿಸರ್ಜನಾಂಗಗಳು: ಮೂತ್ರಪಿಂಡಗಳು ವಿಸರ್ಜನಾಂಗಗಳಾಗಿ ಕಾರ್ಯ ನಿರ್ವಹಿಸುವುವು. ಕೆಲವು ದ್ವಿಕವಚಿಗಳಲ್ಲಿ ಎರಡು ಮೂತ್ರಪಿಂಡಗಳು ಕೂಡಿಕೊಂಡಿವೆ.  ಹೃದಯ ಪೊರೆಯ ಗ್ರಂಥಿಯಿಂದ ಹಿಪ್ಪೂರಿಕ್ ಆಮ್ಲದ ವಿಸರ್ಜನೆ ನಡೆಯುತ್ತದೆ.  ಅನೇಕ ಕಡಲು ವಾಸಿಗಳಲ್ಲಿ ಕನಿಷ್ಠ ಲವಣಾಂಶವಿರುವಾಗ ದ್ರವ ವಿನಿಮಯವಾಗಲಾರದು. ಅಂಥ ಸಂದರ್ಭಗಳಲ್ಲಿ ಲವಣ ರಕ್ಷಣೆಗಾಗಿ ಇವು ಚಿಪ್ಪುಗಳನ್ನು ಭದ್ರವಾಗಿ ಮುಚ್ಚಿಕೊಳ್ಳುತ್ತವೆ.  ಪೆಕ್ಟನ್‍ನಲ್ಲಿ ಮೂತ್ರ ಪಿಂಡಗಳಿಗೂ ಪ್ರಜನನಾಂಗಗಳಿಗೂ ನೇರ ಸಂಪರ್ಕವುಂಟು.
(7) ಪ್ರಜನನಾಂಗಗಳು ಮತ್ತು ಬೆಳೆವಣಿಗೆ : ಪೋರೊಮಿಯ, ಕೆಲ್ಲ್ಯ, ಪರಾವಲಂಬಿ ಬಗೆಗಳು ದ್ವಿಲಿಂಗಿಗಳನ್ನು ಬಿಟ್ಟರೆ ಉಳಿದವುಗಳಲ್ಲಿ ಲಿಂಗಭೇದ ಹೊರನೋಟಕ್ಕೆ ಕಾಣುವುದಿಲ್ಲ.  ಅಸ್ಟಾರ್ಟಿಯಲ್ಲಿ ಗಂಡಿನ ಚಿಪ್ಪು ನಯವಾಗಿವೆ.  ಯಾದರೆ ಹೆಣ್ಣಿನದು ಉರುಟಾಗಿದೆ ಪ್ರೋಟೊಬ್ರ್ಯಾಂಕಿಯ ಮತ್ತು ಫಿಲಿಬ್ರ್ಯಾಂಕಿಯಗಳಲ್ಲಿ ಲಿಂಗಾಣುಗಳು ಮೂತ್ರಪಿಂಡದ ಮೂಲಕ ಹೊರಬರುತ್ತದೆ.  ಆಸ್ಟ್ರಿಯ ಮತ್ತು ಸ್ಫೇರಿಲಯಮ್‍ಗಳಲ್ಲಿ ಮೂತ್ರಾಂಗ ಮತ್ತು ಪ್ರಜನನಾಂಗಗಳು ಮಲಕೂಪಕ್ಕೆ ಹೊರತೆರೆಯುತ್ತದೆ.  ಉಳಿದ ದ್ವಿಕವಚಿಗಳಲ್ಲಿ ಒಂದೊಂದು ಪ್ರಜನನಾಂಗಕ್ಕೆ ಪ್ರತ್ಯೇಕ ನಾಳವುಂಟು.  ಕಸ್ಟಿಡೇರಿಯದ ಗಂಡು ಪ್ರಾಣಿಯಲ್ಲಿ ಮಾತ್ರ ಮೈಥುನಾಂಗ ಮತ್ತು ಅನುಷಂಗಿಕ ಗ್ರಂಥಿಗಳು ಇವೆ.  ಸಾಮಾನ್ಯವಾಗಿ ನಿಷೇಚನೆ ಬಾಹ್ಯರೀತಿಯದು, ಆದರೆ ಆಸ್ಟ್ರಿಯ ವಲ್ಗ್ಯಾರಿಸ್‍ನಲ್ಲಿ ಅಂಡನಾಳದಲ್ಲೇ ನಿಷೇಚನೆ ನಡೆಯುತ್ತದೆ.  ಯೂನಿಯೊ, ಕ್ವಾಡ್ರುಲ ಜಾತಿಯವು ಬೇಸಗೆಯಲ್ಲೂ ಆನೊಡಾಂಟ, ಲ್ಯಾಂಪ್ಸಿಲಿಸ್‍ಗಳು ಬೇಸಗೆಯ ಕೊನೆಯ ಭಾಗದಲ್ಲೂ ಸಂತಾನಾಭಿವೃದ್ದಿಯಲ್ಲಿ ತೊಡಗುತ್ತದೆ.

ಕೆಲವು ದ್ವಿಕವಚಿಗಳು ಒಮ್ಮೆಗೆ 15 ರಿಂದ 115  ದಶಲಕ್ಷ ಅಂಡಗಳನ್ನು ಉತ್ಪಾದಿಸುವುವು.  ಆಸ್ಟ್ರಿಯ ಎಡ್ಯುಲಿಸ್ ಮತ್ತು ಆಲ್ಯೂರಿಡ ಎಂಬ ಪ್ರಭೇದಗಳಲ್ಲಿ ಮೊದಲು ವೀರ್ಯಾಣುವು ಅನಂತರ ಅಂಡವೂ ಉತ್ಪತ್ತಿಯಾಗುವುವು. ನಿಷೇಚಿತ ಅಂಡದಿಂದ ಮೊದಲು ಟ್ರೋಕೊಫೋರ್ ಎಂಬ ಹೆಸರಿನ ಡಿಂಬ ರೂಪುಗೊಳ್ಳುತ್ತದೆ.  ಅನಂತರ ಇದು ಈಜುಪೊರೆಯನ್ನು ರೂಪಿಸಿಕೊಂಡು ವೆಲಿಜರ್ ಡಿಂಬವಾಗುತ್ತದೆ.  ಇದು 1  ರಿಂದ 4 ವಾರಗಳ ತನಕ ಈಜುತ್ತಿದ್ದು, ಚಿಪ್ಪು ಗ್ರಂಥಿ ಬೆಳೆಸಿಕೊಂಡು ತಳಕ್ಕೆ ಮುಳುಗುತ್ತದೆ. ಆಚ್ಫಾದನ ಮತ್ತು ಚಿಪ್ಪುಗಳ ಬೆಳೆವಣಿಗೆಯಿಂದ ಆರಂಭಗೊಳ್ಳುದ ರೂಪಪರಿವರ್ತನೆ ಪ್ರಕ್ರಿಯೆ ಕ್ರಮೇಣ ನರವ್ಯೂಹ, ಸ್ನಾಯುಗಳು, ಸಂತುಲನಾಂಗ, ಕಿವಿರು ಮತ್ತು ಪಾದಗಳ ರೂಪುಗೊಳ್ಳುವಿಕೆಯಲ್ಲಿ ಕೊನೆಗೊಳ್ಳುತ್ತದೆ.  ಪ್ರೋಟೊಬ್ರ್ಯಾಂಕಿಯದ ವೆಲಿಜರ್ ಡಿಂಬ ಪೀಪಾಯಿ ಆಕಾರದ್ದು.

ಉತ್ತರ ದಕ್ಷಿಣ ಧ್ರುವವಾಸಿಗಳಲ್ಲಿ ಹಾಗೂ ಕೆಲವು ಸಿಹಿನೀರು ಪ್ರಾಣಿಗಳಲ್ಲಿ ಸಂತಾನ ಸಂರಕ್ಷಣೆ ಕಾಣಬರುತ್ತದೆ.  ಈ ಬಗೆಯ ದ್ವಿಕವಚಿಗಳಲ್ಲಿ ಅಂಡಗಳು ಕಿವಿರುಗಳಲ್ಲಿ ಅಂಟಿಕೊಂಡಿದ್ದು ಮರಿಯಾದ ಮೇಲೆಯೇ ಬೇರೆಯಾಗುವುವು. ಕೇವಲ 10 ರಿಂದ 16 ಮರಿಹಾಕುವ ಸ್ಟೇರಿಯಮ್ ಎಂಬುದರಲ್ಲಿ ಅಂಡ ಎರಡು ಕೋಶಭಿತ್ತಿಗಳಿಂದ ಆವೃತವಾಗಿದೆ. ಸಂತಾನಾಭಿವೃದ್ಧಿಯ ಶ್ರಾಯದಲ್ಲಿ ವಲಸೆ ಹೋಗುವ ಪರಿಪಾಟಿಯಿರುವುದು ಡ್ರೈಸೀನ ಎಂಬುದರಲ್ಲಿ ಮಾತ್ರ.  ಇದು ಅಂಥ ಕಾಲದಲ್ಲಿ ಕ್ಯಾಸ್ಟಿಯನ್ ಕಡಲಿನಿಂದ ಸಿಹಿನೀರಿಗೆ ಹೋಗುತ್ತದೆ.

ಯೂನಿಯೊನಾಯ್‍ಡೀಯ ಕುಟುಂಬದ ಸದಸ್ಯಗಳಲ್ಲಿ ಇದಕ್ಕಿಂತ ಭಿನ್ನವಾದ ಜೀವನಕ್ರಮವನ್ನು ಕಾಣಬಹುದು. ಹೆಣ್ಣು ಪಕ್ವವಾದ ಅಂಡವನ್ನು ಊಧ್ರ್ವ ಶ್ವಾಸಾಶಯಕ್ಕೆ ಬಿಡುಗಡೆ ಮಾಡುತ್ತದೆ.  ಹೊರಗಿನಿಂದ ಬಂದ ವೀರ್ಯಾಣುವಿನೊಡನೆ ಇದು  ಮಿಳಿತವಾಗಿ ಕಿವಿರುಗಳ ಜಲನಳಿಕೆಗಳಿಗೆ ಅಂಟಿಕೊಳ್ಳುವುದು.  ಇದರ ಸುತ್ತ ಕಿವಿರು ಪತ್ರಗಳು ಬೆಳೆದು ಸಂತಾನಸಂಚಿಯ ರೂಪತಾಳುವುವು.  ಡಿಂಬಗಳ ಬೆಳೆವಣಿಗೆ ಪೂರ್ಣವಾದ ಮೇಲೆ ಅವು ಒಸರುಗೊಳವೆಯ ಮೂಲಕ ಹೊರಬೀಳುತ್ತವೆ. ಚಲನಸಾಮಥ್ರ್ಯವನ್ನು ಪಡೆದಿರುವ ಈ ಡಿಂಬಗಳು ಸೂಕ್ತವಾದ ಮೀನು ದೊರಕಿದರೆ ಅವುಗಳ ಕಿವಿರುಗಳಿಗೆ ಅಂಟಿಕೊಂಡು ಬಹಿರ್ ಪರಾವಲಂಬಿ ಜೀವಿಗಳಾಗುತ್ತವೆ.  ಆತಿಥೇಯಗಳಿಂದ ಪೋಷಕ ಪದಾರ್ಥಗಳನ್ನು ಹೀರಿ, 10-70 ದಿವಸಗಳಲ್ಲಿ ಮರಿ ದ್ವಿಕವಚಿಗಳಾಗಿ ರೂಪಾಂತರಗೊಳ್ಳುವುವು.  ಲಾಂಪ್ಸಿಲಸ್ ವೆಂಟ್ರಿಕೋಸಮ್ ಎಂಬ ಸಿಹಿ ನೀರುವಾಸಿ ದ್ವಿಕವಚಿ ಡಿಂಬದ ಬಿಡುಗಡೆಗೆ ಮುನ್ನವೆ ತನ್ನ ಆಚ್ಫಾದನದಿಂದ ಆಮಿಷ ತೋರಿ ಅನೇಕ ಮೀನುಗಳನ್ನು ಆಕರ್ಷಿಸುವುದು. ಪಕ್ಷಿಗಳು ಮತ್ತು ಜಲ ಜೀರುಂಡೆಗಳೂ ಕೆಲವು ಸಿಹಿನೀರು ಶಿಫಲಗಳ ಪ್ರಸಾರಕ್ಕೆ ನೆರವಾಗುವುಂಟು.

ಅಮೆರಿಕದ ಅಟ್ಲಾಂಟಿಕ್ ಶೀರದಲ್ಲಿ ವಾಸಿಸುವ ಕ್ರ್ಯಾಸಾಸ್ಟ್ರಿಯ ವರ್ಜಿನಕದಲ್ಲಿ ನಿಷೇಚನೆ ಬಾಹ್ಯ ರೀತಿಯದಾದರೂ ಡಿಂಬವು ಕೇವಲ 48  ಗಂಟೆಗಳ ಅವಧಿಯಲ್ಲಿ ದ್ವಿಕವಚಿಯಾಗಿ ರೂಪಾಂತರ ಹೊಂದುವುದು.  ಇದು ಸುಮಾರು 2  ವಾರಗಳ ಕಾಲ ಈಜುತ್ತಿದ್ದು ತಳ ಸೇರಿ ಅನಂತರ ಪಾದದ ಸಹಾಯದಿಂದ ಚಲಿಸಲು ಪ್ರಾರಂಭಿಸುತ್ತದೆ.  ತರುವಾಯ ಇದರ ಎಡಚಿಪ್ಪು ಆಧಾರಕ್ಕೆ ಅಂಟಿಕೊಂಡು ಎಂದಿನಂತೆ ಜೀವಿಸುತ್ತದೆ.  ಆಸ್ಟ್ರಿಯ ಲೂರಿಡದಲ್ಲಿ ನಿಷೇಚಿತ ಅಂಡ ದ್ವಿಕವಚಿ ಡಿಂಬವಾಗಿ ತಾಯಿಯ ಆಚ್ಛಾದನಾಶ್ರಯದಲ್ಲಿ ಬೆಳೆದು. ಕ್ಷಣಕಾಲ ಸ್ವತಂತ್ರ ಜೀವಿಯಾಗಿದ್ದು ಅನಂತರ ಯಾವುದಾದರು ಆಧಾರಕ್ಕೆ ಅಂಟಿಕೊಳ್ಳುತ್ತದೆ. ಹೀಗೆ ಬಂಧಿಸಿದ ಮರಿಸಿಂಪಿಗಳಿಗೆ ಸ್ಟ್ಯಾಟಾ ಎಂದು ಹೆಸರು.

ದ್ವಿಕವಚಿಗಳ ಆರ್ಥಿಕ ಪ್ರಾಮುಖ್ಯ : ಹಡಗುಹುಳುಗಳು ಮರದ ದಿಮ್ಮಿ ಮತ್ತು ಹಡಗುಗಳ ಮರಮುಟ್ಟುಗಳನ್ನು ಕೊರೆದು ನಾಶಮಾಡುತ್ತವೆ. ಸಿಹಿ ನೀರಿನ ಶಿಫಲಗಳು ಜಲಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುವುವೆಂದು ಹೇಳಲಾಗಿದೆ,  ಸೂಕ್ಷ್ಮಜೀವಿಗಳು ಇವುಗಳ ಆಹಾರವಾದ್ದರಿಂದ ಇಂಥ ಜೀವಿಗಳನ್ನು ತಿಂದು ಇವು ನೀರನ್ನು ನಿರಂತರವೂ ಶೋಧಿಸುತ್ತಿರುತ್ತದೆ.  ಸಿಂಪಿಗಳು ಮಾನವನ ಆಹಾರವೆನಿಸಿವೆ.  ಅಮೆರಿಕದ ಇಂಡಿಯನರು ತಿಂದು ಹಾಕಿದ ಸಿಂಪಿಗಳ ಚಿಪ್ಪುಗಳ ರಾಶಿ ಸ್ಯಾನ್‍ಫ್ರಾನ್ಸಿಸ್ಕೊ ಬಳಿ 1 ದಶ ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿ ಕಂಡುಬಂದಿವೆ.  ಇದರಿಂದ ಸಿಂಪಿಗಳು ಬಹು ಹಿಂದಿನಿಂದ ಆಹಾರವಾಗಿ ಬಳಕೆಯಲ್ಲಿದ್ದವೆಂಬುದು ಗೊತ್ತಾಗುತ್ತದೆ.  ಸುಮಾರು 30  ದಶಲಕ್ಷ ಬುಷೆಲ್ಲುಗಳಷ್ಟು ಸಂಪಿಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಹಾರಕ್ಕಾಗಿ ಪ್ರತಿ ವರ್ಷವೂ ಹಿಡಿಯಲಾಗುತ್ತಿದೆ. ಅಮೆರಿಕದಲ್ಲಿ ಸಿಂಪಿಗಳ ಕೃಷಿ ಬಹು ಲಾಭದಾಯಕ ಉದ್ದಿಮೆಯೆನಿಸಿದೆ. ದ್ವಿಕವಚಿಗಳಲ್ಲೆಲ್ಲ ಮಾಯಾ ಅರೆನೇರಿಯ ಮತ್ತು ಮೆರ್ಸಿನೇರಿಯ ಮೆರ್ಸಿನೇರಿಯಗಳು ಅಮೇರಿಕದಲ್ಲೂ ಮೈಟಿಲಸ್ ಎಡ್ಯುಲಿಸ್‍ಗಳು ಯೂರೋಪಿನಲ್ಲೂ ವಿಶೇಷವಾಗಿ ಉಪಯೋಗದಲ್ಲಿದೆ.  ಪೆಕ್ಟಿನ್ನಿನ ದಪ್ಪನೆಯ ಅಭಿಕರ್ಷಕ ಸ್ನಾಯು ಜನಪ್ರಿಯ ಖಾದ್ಯ ವಸ್ತು.

ಈಸ್ಟ್ ಇಂಡೀಸಿನ ಆದಿವಾಸಿಗಳು 3 ಉದ್ದ 500 ಪೌಂ, ತೂಕದ ದೈತ್ಯ ಶಿಫಲದ ಚಿಪ್ಪನ್ನು ತೊಟ್ಟಿಲಾಗಿ ಬಳಸುವರೆನ್ನಲಾಗಿದೆ. ದ್ವಿಕವಚಿಗಳ ಉತ್ಪನ್ನಗಳಲ್ಲಿ ಅತ್ಯಂತ ಮುಖ್ಯವಾದ್ದು ಮುತ್ತು. ಸಿಹಿನೀರಿನ ಕೆಲವು ಶಿಫಲ ಮತ್ತು ಸಿಂಪಿಗಳು ತಯಾರಿಸುವ ಮುತ್ತಿಗಿಂತಲೂ ಕಡಲ ಮುತ್ತುಚಿಪ್ಪಿನ ಹುಳುವಿನಿಂದಾಗುವ ಮುತ್ತೇ ಬಲು ಬೆಲೆಯುಳ್ಳದ್ದು. ಪ್ರಶಾಂತ ಸಾಗರದ ಅಮೆರಿಕ ತೀರ, ಉತ್ತರ ಆಸ್ಟ್ರೇಲಿಯ, ಈಸ್ಟ್ ಇಂಡೀಸ್, ಮತ್ತು ಪರ್ಶಿಯನ್ ಭೂಶಿರಗಳು ಮುತ್ತು ಹುಳುಗಳ ತೌರು, ಭಾರತದ ಕಚ್ ಭೂಶಿರದಲ್ಲಿ ಪಿಂಕ್ಟಾಡ ವಲ್ಗ್ಯಾರಿಸ್ ಮತ್ತು ಕ್ಯಾಲಿಫೋರ್ನಿಯದಲ್ಲಿ ಪಿ. ಮಾರ್ಗಾರೆಟಿಫೆರ್‍ಗಳು ಸರ್ವೇಸಾಮಾನ್ಯ. ಭಾರತದ ಕ್ರುಸಾಡೈ ದ್ವೀಪಗಳಲ್ಲಿ ಇದನ್ನು ಬೆಳೆಸಲಾಗುತ್ತದೆ.  ದೇಹಕ್ಕೆ ನುಗ್ಗುವ ಪರಕೀಯವಸ್ತುಗಳ ಪೂತಿಕೋಶದ ಸುತ್ತ ನೇಕರ್ ವಸ್ತು ಸ್ರವಿತವಾಗಿ ಮುತ್ತುಗಳಾಗುತ್ತವೆ.  ಪರತಂತ್ರ ಜೀವಿ ಅಥವಾ ಪರವಸ್ತುಗಳಿಂದ ದೇಹಕ್ಕಾಗುವ ಗಾಯವೇ ಮುತ್ತಾಗಿ ಮಾರ್ಪಾಟಾಗುವುದರಿಂದ, ಜಪಾನೀಯರು ಅನ್ಯ ವಸ್ತುಗಳನ್ನು ಪಿಂಕ್ಟಾಡ ಮೆರ್ಟನ್ಸಿಯ ಎಂಬುದರ ದೇಹದೊಳಕ್ಕೆ ಉದ್ದೇಶಪೂರ್ವಕವಾಗಿ ಸೇರಿಸಿ, ಆಚ್ಛಾದನವನ್ನು ಪ್ರಚೋದಿಸಿ ಹೀಗೆ ಪ್ರಚೊದನೆಗೊಂಡ ಪ್ರಾಣಿಯನ್ನು 3  ರಿಂದ 7  ವರ್ಷಗಳ ವೆರೆಗೆ ಸಾಕಿ ಮುತ್ತನ್ನು ಪಡೆಯಲಾಗುತ್ತದೆ.

ಚಿಪ್ಪು ಇಸ್ತ್ರಿಯ ಶಾಖಕ್ಕೆ ಮಣಿಯದು. ಇದರಿಂದ ಸಿಹಿ ನೀರಿನ ಶಿಫಲಗಳಿಂದ ಗುಂಡಿಗಳನ್ನು ತಯಾರಿಸುವುದುಂಟು. ಮಿಸಿಸಿಪ್ಪಿ ಮತ್ತು ಒಹೈಯೋ ನದಿಗಳಲ್ಲಿ ಮೀನಿನ ಮಿತಿಮೀರಿದ ಬೇಟೆಯಿಂದಾಗಿ ಶಿಫಲಗಳ ಸಂಖ್ಯೆ ಕುಂದಿತಾದ್ದರಿಂದ, ಅಮೆರಿಕ ಸಂಯುಕ್ತ ಸಂಸ್ಥಾನದ ಮತ್ಸ್ಯ ಮತ್ತು ವನ್ಯ ಮೃಗ ಸಂರಕ್ಷಣಾ ಸಂಘ ಗ್ಲಾಕಿಡಿಯ ಡಿಂಬಗಳನ್ನು ಮೀನುಗಳ ದೇಹಕ್ಕೆ ಸೇರಿಸಿ ಶಿಫಲಗಳನ್ನು ಬೆಳೆಸುತ್ತಿದೆ.  ಕೆಲವು ದೇಶಗಳಲ್ಲಿ ಈ ಪ್ರಾಣಿಗಳಿಂದ ಹಂದಿ ಮತ್ತು ಕೋಳಿಗಳ ಆಹಾರವನ್ನು ತಯಾರಿಸುವರು. ಶಿಫಲಗಳ ಚಿಪ್ಪನ್ನು ಹಣದ ಬದಲಾಗಿ ಬಳಸಲಾಗುತ್ತಿತ್ತೆಂದು ಹೇಳಲಾಗಿದೆ. ರತಿ ಚಿಪ್ಪಿನಿಂದ ತಯಾರಿಸಿದ ಮಣಿಸರವನ್ನು ಅಮೆರಿಕದ ಇಂಡಿಯನರು ಹಣವನ್ನಾಗಿಯೂ ಅಲಂಕಾದ ವಸ್ತುವನ್ನಾಗಿಯೂ ಉಪಯೋಗಿಸುತ್ತಿದ್ದರು. ದಕ್ಷಿಣ ಇಟಲಿಯವರು ಪಿನ್ನ ಎಂಬ ದ್ವಿಕವಚಿಯ ಅಂಟುದಾರವನ್ನು ರೇಷ್ಮೆಗೆ ಬದಲಾಗಿ ಬಳಸುತ್ತಿದ್ದರು.

ದ್ವಿಕವಚಿಗಳ ವರ್ಗೀಕರಣ: ಬಹುತೇಕ ದ್ವಿಕವಚಿಗಳಲ್ಲಿ ಕಾಣಬರುವ ಒಳ ಮತ್ತು ಹೊರ ಸಾಮ್ಯತೆಯಿಂದಾಗಿ ವರ್ಗೀಕರಣ ವಿಧಾನ ಕಠಿಣವಾಗಿತ್ತು. ಕಿವಿರು ರಚನೆಗಳ ಆಧಾರದ ಮೇಲೆ ಇವನ್ನು ಪೆಲ್ಸೆನೀರ್ ಎಂಬಾತ ಪ್ರೋಟೊ ಬ್ರ್ಯಾಂಕಿಯ, ಫಿಲಿಬ್ರ್ಯಾಂಕಿಯ, ಸೂಡೋಲ್ಯಾಮೆಲಿಬ್ರ್ಯಾಂಕಿಯ, ಯೂಲ್ಯಾಮೆಲಿಬ್ರ್ಯಾಂಕಿಯ ಮತ್ತು ಸೆಪ್ಟಿಬ್ರ್ಯಾಂಕಿಯ ಎಂಬ ಐದು ಗಣಗಳಾಗಿ ವಿಂಗಡಿಸಿದ್ದಾನೆ. ಆಧುನಿಕ ವರ್ಗೀಕರಣ ಈ ಕೆಳಗಿನಂತಿದೆ:

	ವರ್ಗ: ಪತ್ರಶ್ವಾಶಿಗಳು (ಲ್ಯಾಮೆಲಿಬ್ರ್ಯಾಂಕಿಯ) ಅಥವಾ ದ್ವಿಕವಚಿಗಳು (ಬೈವಾಲ್ವಿಯ) ಅಥವಾ ಹಲಪಾದಿಗಳು (ಪೆಲಿಸಿಪೊಡ). 

	ಉಪವರ್ಗ : ಫಿಲಿಬ್ರ್ಯಾಂಕಿಯ + ಸೂಡೋಲ್ಯಾಮೆಲಿಬ್ರ್ಯಾಂಕಿಯ 
	ಗಣ  1   : ಪ್ರೋಟೊಬ್ರ್ಯಾಂಕಿಯ
	ಗಣ  2   : ಟ್ಯಾಕ್ಸೊಡಾಂಟ
	ಗಣ  3  : ಅನಿಸೋಮಯೇರಿಯ
ಉಪವರ್ಗ :  ಯೂಲ್ಯಾಮೆಲಿಬ್ರ್ಯಾಂಕಿಯ
	ಗಣ  1  : ಸ್ಕೈಜೊಡಾಂಟ
	ಗಣ  2   : ಹೆಟೆರೊಡಾಂಟ
	ಗಣ  3  : ಅಡಪೆಡಾಂಟ
	ಗಣ  4  : ಅನೊಮಲೆಲಾಡ್ ಸ್ಟೇಟ (ಸೆಪ್ಟಿಬ್ರ್ಯಾಂಕಿಯಗಳು ಸೇರಿ).
(ಎಸ್.ಎಚ್.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ